Friday, August 25, 2017

ದ್ವಾರಕ, ಗುಜರಾತ್

ನಮ್ಮ  ಭಾರತ ದೇಶದ ಪಶ್ಚಿಮದಲ್ಲಿರುವ ಗುಜರಾತ್ ರಾಜ್ಯದ ಅರಬ್ಬೀ ಸಮುದ್ರ ತೀರದಿ ಇರುವ ನಗರ ದ್ವಾರಕ. ವಿಷ್ಣು ಸ್ವರೂಪನಾದ ಕೃಷ್ಣನು ಮಥುರದಲ್ಲಿ ಹುಟ್ಟಿ ಇಲ್ಲಿ ರಾಜ್ಯಭಾರ ಮಾಡಿದನೆಂದು ಭಾಗವತ ಹೇಳುತ್ತದೆ.  ಹಾಗಾಗಿ ಈ ದ್ವಾರಕ ನಗರವನ್ನು ದೇವಭೂಮಿ ದ್ವಾರಕಯೆಂದು ಸಹ ಕರೆಯುತ್ತಾರೆ. ನಮ್ಮ ಕೃಷ್ಣನು ಇಲ್ಲಿ ದ್ವಾರಕಾಧೀಶ ಎಂಬ ಹೆಸರಿನಲ್ಲಿ ಅವತರಿಸಿರುವ ಕಾರಣದಿಂದ ಈ ದ್ವಾರಕ ನಗರ ಸಪ್ತ ಮಹಾ ಧಾರ್ಮಿಕ ಸ್ಥಳಗಳಲ್ಲಿ ಒಂದು. ದ್ವಾರಕನಾಗರವು ಅರಬ್ಬೀ ಸಮುದ್ರದಲ್ಲಿ ಮುಳುಗಿತ್ತು. ಇದು ದ್ವಾಪರಯುಗದ ಅಂತ್ಯ ಎಂದು ಹೇಳಲಾಯಿತು.

ಇದರ ಸಲುವಾಗಿ, ನಮ್ಮ ಪ್ರಿಯ ದೇವನಾದ ಕೃಷ್ಣ  ರಾಜವೈಭವನ್ನು ಪ್ರತಿಬಿಂಬಿಸುವ ಈ ನಗರದಲ್ಲಿ, ಕೃಷ್ಣನ ಅವತಾರವಾದ ದ್ವಾರಕಾಧೀಶ ದೇವಸ್ಥಾನವನ್ನು ಆದಿ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದರು. ಶಂಕರಾಚಾರ್ಯರು ದೇಶದೆಲ್ಲೆಡೆ ಹಿಂದು ಧರ್ಮ ಪ್ರಚಾರ ಮಾಡುವ ನಿಟ್ಟಿನಲ್ಲಿ ದೇಶದ ನಾಲ್ಕು ಮೂಲೆಗಳಲ್ಲಿ ಶಾರದಾ ಪೀಠವನ್ನು ಸ್ಥಾಪಿಸಿದರು.  ಆ ನಾಲ್ಕು ಮಠಗಳ ಸ್ಥಾಪನೆಯಲ್ಲಿ ಒಂದು ಈ ದ್ವಾರಕ ಮಠ (ಅಥವಾ ಶಂಕರ ಮಠ). ಶಂಕರಾಚಾರ್ಯರು ಸ್ಥಾಪಿಸಿದ ಈ ಮಠವನ್ನು ಮೊಹಮದಿ ಸುಲ್ತಾನ ಕೆಡವಿದ್ದನ್ನು. ಅದನ್ನು ನಂತರ ಬ್ರಿಟೀಷರ ಕಾಲದ ಗೈಕ್ವಾಡನ ಮಹಾರಾಜ ಖಾಂಡೇರಾವ್ ಸರಿಪಡಿಸಿದನು. ನಂತರ ಸಯಾಜಿರಾವ್ ಎಂಬ ಅರಸನು ನವೀಕರಣ ಮಾಡಿದನೆಂದು ಇತಿಹಾಸದಲ್ಲಿ ಹೇಳಲಾಗಿದೆ.  
ಈ ದೇವಸ್ಥಾನದ ಅನೇಕ ವಿಶೇಷಗಳನ್ನು ಹೊಂದಿದೆ. ಅದರಲ್ಲಿ ಒಂದೇನೆಂದರೆ, ಈ ಏಳು ಸುತ್ತಿನ ಮಹಡಿಯ ಮಂದಿರದ ಶಿಖರದಲ್ಲಿ ಹಾರುತ್ತಿರುವ ಧ್ವಜ. ಈ ಧ್ವಜವನ್ನು ನೀವು ಸುಮಾರು ಹತ್ತು ಮೈಲಿ ದೂರದಿಂದ ನೋಡಬಹುದು. ಹಾಗಾಗಿ ಈ ದೇವಸ್ಥಾನದ ವಿಶೇಷ ಪೂಜೆಗಳಲ್ಲಿ ಈ ಧ್ವಜ ಪೂಜೆ ಒಂದು. ಈ ಪೂಜೆಗೆ ನೋಂದಣಿ ಮಾಡಿದ ಭಕ್ತರ ಗೋತ್ರ , ನಕ್ಷತ್ರ , ಹೆಸರಿನಿಂದ ಪೂಜೆ ಸಲ್ಲಿಸಿ ನಂತರ ಮಂದಿರದ ಶಿಖರದಲ್ಲಿ ಹರಿಸಲ್ಪಡುತ್ತದ್ದೆ. 
ಇಲ್ಲಿನ ಇನ್ನೊಂದು ವಿಶೇಷವೇನೆಂದರೆ, ಈ ದೇವಸ್ಥಾನವು ಗೋಮತಿ ನದಿದಡದಲ್ಲಿ ಇರುವುದು. ದೇವಸ್ಥಾನದ ಇನ್ನೊಂದು ದ್ವಾರ ಈ ಗೋಮತಿ ನದಿಯ ತೀರದಿ ಇರುವುದು. ಭಕ್ತರು ಈ ನದಿಯಲ್ಲಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡು ದೇವಸ್ಥಾನಕ್ಕೆ ಇರುವ ೫೬ ಮೆಟ್ಟಿಲುಗಳನ್ನು ಹತ್ತಿ ಪರಮಾತ್ಮನ ದರ್ಶನಕ್ಕೆ ಹೋಗುವ ಪ್ರತೀತಿ ಇದೆ. 
ಈ ಧ್ವಾರಕಾಧೀಶ ದೇವಸ್ಥಾನದ ಸುತ್ತುಮುತ್ತಲಿನಲ್ಲಿ ಅನೇಕ ದೇವಾಲಯಗಳು ಇವೆ. ಕೃಷ್ಣನನ್ನು ಆಡಿಸಿದ ಯಶೋದಾದೇವಿ, ಕೃಷ್ಣನ ಮಡದಿಯರಾದ ರಾಧಾ, ಸತ್ಯಭಮರ ದೇವಲಾಯಗಳಿವೆ. ಅಷ್ಟೇ ಅಲ್ಲದೆ ಕೃಷ್ಣನ ಮಗನಾದ ಪ್ರದ್ಯುಮ್ನ ಹಾಗು ಮೊಮ್ಮಗನಾದ ಅನಿರುದ್ಧನನ್ನು ಸಹ ದರ್ಶನ ಮಾಡಬಹುದು.
ಇಲ್ಲಿನ ಇನ್ನೊಂದು ವಿಶೇಷ, ಇಲ್ಲಿ ಕೃಷ್ಣನ ಪ್ರಿಯವಾದ ರುಕ್ಮಿಣಿಯ ದೇಗುಲವಿಲ್ಲ. ಇದರೆ ಹಿಂದೆ ಬಹುಮುಖ್ಯ ಕಾರಣಕರ್ತರು  ಧುರ್ವಾಸಮುನಿಗಳು. 
ಇದರ ಕಥೆ ಹೀಗಿದೆ:
ನಮ್ಮ ವೇದಗಳಲ್ಲಿ ಬ್ರಾಹ್ಮಣರಿಗೆ ಅಡಿಗೆ ಮಾಡಿ ಊಟ ಹಾಕುವುದು ಅತ್ಯಂತ ಶ್ರೇಷ್ಠಕರವಾದ್ದದ್ದು.  ಹಾಗಾಗಿ  ಒಂದು  ದಿನ  ಕೃಷ್ಣ  ರುಕ್ಮಿಣಿಯು  ತಮ್ಮ  ಕುಲಗುರುಗಳಾದ  ಧೂರ್ವಸಮುನಿಯವರ  ಬಳಿ  ಬಂಧು  , ತಮ್ಮ  ಮನೆಯಲ್ಲಿ  ವಿಶೇಷ  ಭೋಜನಕ್ಕೆ  ಮುನಿಗಳನ್ನು  ಆಹ್ವಾನಿಸುತ್ತಾರೆ . ಆಗ  ದುರ್ವಾಸಮುನಿಗಳು  ಕೃಷ್ಣ  ಮತ್ತು  ರುಕ್ಮಿಣಿಯವರೇ  ಕರೆದೊಯ್ಯಬೇಕೆಂದು  ಹೇಳುತ್ತಾರೆ. ಇದರ  ಪ್ರಯುಕ್ತ  ಕೃಷ್ಣ  ಮತ್ತು  ರುಕ್ಮಿಣಿಯೇ  ಮುನಿಗಳನ್ನು  ಕರೆದೊಯ್ಯುತಾರೆ. ಹೋಗುವ  ದಾರಿಯಲ್ಲಿ  ರುಕ್ಮಿಣಿಯವರಿಗೆ  ತಾಳರಲದಷ್ಟು  ದಾಹವಾಗುತ್ತದೆ.  ಆಗ  ಕೃಷ್ಣನು  ಗಂಗೆ  ಯಮುನೆಯನ್ನು  ಚಿಮುಕಿಸ್ಸಿ  ರುಕ್ಮಿಣಿಗೆ  ದಾಹವನ್ನು  ತೀರಿಸುತ್ತಾನೆ . ಆಗ ಧೂರ್ವಸಮುನಿಯವರು  ಕೋಪಗೊಳ್ಳುತಾರೆ .  ಏಕೆಂದರೆ , ನಮ್ಮ  ಧರ್ಮದಲ್ಲಿ  ಮೊದಲು  ಬ್ರಾಹ್ಮಣರಿಗೆ  ನೀಡಿ  ನಂತರ  ಸೇವಿಸಬೇಕು  ಎನ್ನುವ  ನಿಮಯ  ಉಂಟು .  ಕೃಷ್ಣ  ರುಕ್ಮಿಣಿಯು ಧರ್ಮ ವಿರೋಧಿಸಿದನು  ಎಂದು  ಕೋಪಗೊಂಡ  ಧೂರ್ವಸಮುನಿಯವರು  ಕೃಷ್ಣ  ರುಕ್ಮಿಣಿಯರಿಗೆ  ಶಾಪವನ್ನು  ನೀಡುತ್ತಾರೆ. ಶಾಪವೇನೆಂದರೆ  , ರುಕ್ಮಿಣಿಯು  ೨೫ ವರ್ಷಗಳ  ಕಾಲ  ವನವಾಸ  ಹೋಗಬೇಕು  ಎಂದು  ಹಾಗು  ಕೃಷ್ಣನಿಗೆ  ಅವನ  ರಾಜ್ಯವಾದ  ದ್ವಾರಕವು  ನೀರಿಲ್ಲದ  ಭೂಮಿ  ಅಗಲಿಯೆಂದು .
ಇದರ  ಸಲುವಾಗಿ  ದ್ವಾರಕಾನಗರದಲ್ಲಿ  ಕುಡಿಯೋದಕ್ಕೆ  ತಕ್ಕಂಥ  ನೀರು  ಈಗಲೂ  ಇಲ್ಲ .
ಹಾಗು  ದ್ವಾರಕದಲ್ಲಿ  ರುಕ್ಮಿಣಿಯ  ದೇವಸ್ಥಾನವಿಲ್ಲ . ರುಕ್ಮಿಣಿಯ  ದೇವಾಲಯವನ್ನು  ನೀವು  ಹತ್ತಿರದ  ದ್ವೀಪ  ಬೆಯ್ಟ್  ದ್ವಾರಕದಲ್ಲಿ  ನೋಡಬಹುದು . 
ದ್ವಾರಕಾನಗರ  ಜನರಿಗೆ  ನೀರು  ಇಲ್ಲದ  ಪರಿಸ್ಥಿತಿ  ಇದ್ದುದರಿಂದ , ಕೃಷ್ಣನು  ಸಮುದ್ರ  ರಾಜನ  ಮಗಳಾದ  ಗೋಮತಿ  ಯನ್ನು  ನದಿ  ರೂಪದಲ್ಲಿ  ಮಾಡುವೆ  ಆಗುತ್ತಾನೆ . ಆದರೆ  ಇಲ್ಲಿನ  ನೀರು  ಕುಡಿಯಲು  ಯೋಗ್ಯವಲ್ಲ . ಹಾಗಾಗಿ  ದ್ವಾರಕಕ್ಕೆ  ಕುಡಿಯುವ  ನೀರು  ಸುಮಾರು  ೧೦  ಕಿಲೋಮೀಟರು  ದೂರದ  ಊರಿನಿಂದ  ಬರುತ್ತದೆ .
ನಾನು  ಶಾಲೆಯಲ್ಲಿ  ಇದ್ದಾಗ  ಕಲಿತಿದ್ಧು , ನದಿ  ಹರಿದು  ಸಮುದ್ರವನ್ನು  ಸೇರುತ್ತದೆ  ಎಂದು . ಅದನ್ನು  ನಾನು  ಇಲ್ಲಿ  ಪ್ರತ್ಯಕ್ಷವಾಗಿ  ಕಂಡೆನು . ಗೋಮತಿ  ನದಿ  ಸಮುದ್ರವನ್ನು  ಸೇರುವುದನ್ನು  ನೀವು  ಈ  ದೇವಸ್ಥಾನದ  ಬಳಿ  ಗೊಂತಿ  ಘಾಟ್  ನಲ್ಲಿ  ಕಾಣಬಹುದು . ಇಲ್ಲಿನ  ಸೂರ್ಯಾಸ್ತವು  ಒಂದು  ಸುಂದರ ಕ್ಷಣ  .
ಇನ್ನೊಂದು  ವಿಶೇಷವೇನೆಂದರೆ  ಇಲ್ಲಿ  ಬ್ರಾಹ್ಮಣರಿಗೆ  ಅವಲಕ್ಕಿಸೇವೆ  ನೀಡುವುದು . ಇದು  ಕೃಷ್ಣ -ಸುದಾಮರ  ಸ್ನೇಹದ  ಪ್ರತಿ. ಸುಧಾಮನು  ಕೃಷ್ಣನನ್ನು  ನೋಡಲು  ಬಂದಾಗ  ಒಳಗಡೆ  ಪ್ರವೇಶಿಸುವ  ಮೊದಲು, ದ್ವಾರದ  ಹೊರಗಡೆಯೇ  ಸ್ವಲ್ಪ  ಹೊತ್ತು ಕುಳಿತು  ವಿಶ್ರಾಂತಿಸುತ್ತಾನೆ. ಅದರ  ಹಿನ್ನಲೆಯಲ್ಲಿ,  ಈ  ದೇವಸ್ಥಾನದ  ಹೊರಗಡೆ, ಮೆಟ್ಟಿಲುಗಳ  ಬಳಿ  ಒಂದು  ಪ್ರಾಂಗಣವಿದೆ. ಅಲ್ಲಿ  ಭಕ್ತರು  ಕುಳಿತು  ವಿಶ್ರಾಂತಿಸುವುದು  ಬಹು  ಆಹ್ಲಾದಕರವಾದದ್ದು . ಇದೆ  ಪ್ರಾಂಗಣದಲ್ಲಿ  ತುಲಾಭಾರ  ಸೇವೆ  ನಡಿಯುತ್ತದೆ.
ಈ  ಕೊಠಡಿಯ  ಎದುರು  ಒಂದು  ಚಿಕ್ಕದಾದ  ದೇವರ ಗೂಡು  ಉಂಟು . ಈ  ದೇವರು  ನೀವು  ಬಂದಿದ್ದೀರೆಂದು  ಹಾಜರಾತಿ  ನೀಡುವನೆಂದು  ಹೇಳುವರು.
ಈಗ  ನಿಮ್ಮ  ಹಾಜರಾತಿ  ಕೊಡುವ  ಸಮಯ. ದಯಮಾಡಿ ನಿಮ್ಮ  ಅನಿಸಿಕೆ  ಅಭಿಪ್ರಾಯವನ್ನು  ನೀಡಿ . ಇಷ್ಟವಾದಲ್ಲಿ  ಎಲ್ಲರಿಗೂ  ಓದಲು  ತಿಳಿಸಿ . ನಿಮ್ಮ  ಸಮಯಕ್ಕೆ  ಹಾಗು  ಪ್ರೋತ್ಸಾಹಕ್ಕೆ  ನನ್ನ  ಕಡೆ  ಇಂದ  ಬಹಳ  ಧನ್ಯವಾದ .
-       ಸಹನ

Friday, February 12, 2016

ಕೃಷ್ಣ ಪ್ರಜ್ಞೆ

ಒಬ್ಬ ವ್ಯಕ್ತಿಯು ಪರಿಪೂರ್ಣವಾದ ತೃಪ್ತಿಯನ್ನು  ಹೊಂದಲು ಕೃಷ್ಣ ಪ್ರಜ್ಞೆ ಉಳ್ಳವನಾಗಿರಬೇಕು . ಕೃಷ್ಣನಿಗಿಂತ  ಶ್ರೇಷ್ಟವಾದುದೇನಿದೆ ? ಹಾಗಾಗಿ  ಕೃಷ್ಣ ಪ್ರಜ್ಞೆ  ಉಳ್ಳವನು ಪರಿಪೂರ್ಣವಾಗುತ್ತಾನೆ . 

ಕೃಷ್ಣ ಪ್ರಜ್ಞೆಯು ಕೃಷ್ಣನಿಂದ ಬಿನ್ನವಲ್ಲ . ಕೃಷ್ಣ ಪ್ರಜ್ಞೆಯ ವ್ಯಕ್ತಿಯು ಕೃಷ್ಣನನ್ನೇ ಹೊಂದಿರುತ್ತಾನೆ . ಕೃಷ್ಣ ಪ್ರಜ್ಞೆಯಲ್ಲಿರುವನ ಭಕ್ತಿಯು ಪರಿಶುದ್ಧವಾದ್ದುದು. ಇಂತಹ  ಪರಿಶುದ್ಧವಾದ ಭಕ್ತಿ ಸೇವೆಯನ್ನು ಕೃಷ್ಣನಿಗೆ ಅರ್ಪಿಸಿದಾಗ , ನಾವು ಕೃಷ್ಣನೊಂದಿಗೆ ಅನ್ಯೋನ್ಯತೆಯಿಂದ ಹಾಗು ಅಂತಿಮವಾಗಿ ಕೃಷ್ಣನ ಪ್ರೇಮವನ್ನು ಗಳಿಸಬಹುದು . 

ನಾವು ಕೃಷ್ಣನಿಗೆ ಭಕ್ತಿ ಸೇವೆ ಸಲ್ಲಿಸುವುದರಿಂದ ನಮ್ಮ ಕಷ್ಟಗಳು  ನೀವಾರಿಸುತ್ತದೆ  ಮತ್ತು ಮುಕ್ತಿ  ಸಿಗುತ್ತದೆ ಎಂದು ನಿರೀಕ್ಷಿಸಬಾರದು . ಯೋಗಿಗಳು  ಮತ್ತು ಜ್ಞಾನಿಗಳು ಲೌಕಿಕ  ಬಂಧನದಿಂದ ಮುಕ್ತರಾಗಲು ಕೃಷ್ಣನಿಗೆ ಸೇವೆ ಸಲ್ಲಿಸುತ್ತಾರೆ . ಆದರೆ, ಪರಿಶುದ್ಧವಾದ  ಭಕ್ತಿಯಲ್ಲಿ  ಇಂತಹ  ಆಸೆಗಳಿರುವುದಿಲ್ಲ .  ಕೃಷ್ಣನಿಗೆ ಪ್ರಿಯವದುದ್ದು ಈ ರೀತಿಯ 'ನನಗೆ  ಲಾಭವಾಗುತ್ತದೆ ' ಎಂಬ ಯೋಚನೆಇಲ್ಲದ ನಿರ್ಮಲವಾದ  ಭಕ್ತಿಯೇ  ಹೊರತು ಲಾಬದಾಯಕ ವ್ಯವಹಾರವಲ್ಲ . 

ಭಗವಧ್ಗೀತೆಯಲ್ಲಿ  ಕೃಷ್ಣ ಹೇಳುತ್ತಾನೆ  "ಯಸ್ಮಿನ್  ಸ್ಥಿತೋ  ನ ದುಃಖೇನ ಗುರುಣಾಪಿ ವಿಚಾಲ್ಯತೇ" , 
ಅಂದರೆ - ಯಾರು ಕೃಷ್ಣ ಪ್ರಜ್ಞೆಯಲ್ಲಿ ನೆಲೆಸಿರುವನೋ ಅವನು ತೀವ್ರವಾದ ಕಷ್ಟಗಳಲ್ಲಿಯೂ ವಿಚಲಿತನಾಗುವುದಿಲ್ಲ . 
ನಾನು ಕೃಷ್ಣನಿಗೆ ಸೇರಿರುವುದು . ನಾನು ಕೃಷ್ಣನ ಭಾಗ . ಹೀಗೆ ಕೃಷ್ಣ ಪ್ರಜ್ಞೆಯಲ್ಲಿ ಚಿಂತನೆ ಮಾಡಿದಾಗ ನಾವು ಕೃಷ್ಣನ ನಿವಾಸವನ್ನು (ಭಗವದ್ಧಾಮ) ಸೇರಬಹುದು ಹಾಗೂ ಪರಿಪೂರ್ಣವಾದ ತೃಪ್ತಿಯನ್ನು ಹೊಂದಬಹುದು . 

।।ಶ್ರೀ  ಕೃಷ್ಣಾರ್ಪಣಮಸ್ತು।।

Tuesday, August 27, 2013

ನಿಜವಾದ ಸುಖ

 



ನಾವೆಲ್ಲರೂ ಕೃಷ್ಣನಲಿ ಭಕ್ತಿ ತೋರಿದಾಗ ಅವನನ್ನು ಪೋಷಿಸುತ್ತೇವೆ . ಅಂತವರನ್ನು ಕೃಷ್ಣ ರಕ್ಷಿಸುತ್ತಾನೆ . ಭಗವದ್ಗೀತೆಯಲ್ಲಿ  ಹೇಳಿರುವಂತೆ ,ಪ್ರತಿ ಜೀವಿಗೂ ಕೃಷ್ಣನು ನಿಜವಾದ ಗೆಳೆಯ . ಈ ಗೆಳೆತನದ ಪುರರ್ಚೆತನಕ್ಕೆ ಕೃಷ್ಣ ಪ್ರಜ್ಞೆಯು ಒಂದು ದಾರಿ .

 ಕೃಷ್ಣ ಪ್ರಜ್ಞೆಯ ಹಾದಿಯಲ್ಲಿ ಮುನ್ನಡೆದಾಗ ಆಧ್ಯಾತ್ಮಿಕ ಸುಖವನ್ನು ಸವಿಯಬಹುದು. ನಿಜವಾದ ಸುಖದ ನೆಲೆಯು ಕ್ಷಣಿಕ ವಸ್ತುಗಳನ್ನು ಮೀರಿದ್ದು ಎನ್ನುವುದು ಬಹು ಜನ ಅರಿಯರು. ಇಂತಹ ನಿಜವಾದ ಸುಖವನ್ನು ನಮ್ಮ ಪ್ರಿಯ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಅರ್ಜುನನಿಗೆ ವರ್ಣಿಸಿ ಹೇಳಿದ್ದಾನೆ .  

 ಆಧ್ಯಾತ್ಮಿಕ ಕಿಡಿಯು ನಿರಾಕಾರವಲ್ಲ . ಅದು ವಾಸ್ತವವಾಗಿಯೂ ಒಬ್ಬ ವ್ಯಕ್ತಿ . ಆಧ್ಯಾತ್ಮಿಕ ಕಿಡಿಯಿಲ್ಲದೆ ದೇಹವು ಸುಖದ ಭಾವವನ್ನು ಅನುಭವಿಸಲಾರದು . ದೇಹವು ಸುಖಿಸುವುದು ಆತ್ಮದಿಂದಲಿ . ಯಾವ ವ್ಯಕ್ತಿಯ ಆತ್ಮ ಅನಿಯಮಿತ   ದಿವ್ಯ ಸುಖವನು ಅನುಭವಿಸುತ್ತಾನೋ  ಅಂತವನು ಸತ್ಯದ ಮಾರ್ಗ ಬಿಟ್ಟು ಅತ್ತಿತ್ತ ಚಲಿಸುವುದಿಲ್ಲ . ಇಂತಹ ಆಧ್ಯಾತ್ಮ ಸುಖವನ್ನು ಪ್ರತಿಯೊಬ್ಬನು ಸವಿಯಬೇಕು. 

  
ಹಾಗೆಯೇ ಕೃಷ್ಣ ಪ್ರಜ್ಞೆಯ ಸ್ಥಾನದಲ್ಲಿ ಸ್ಥಿರನಾದಾಗ ವ್ಯಕ್ತಿಯು ಎಂತಹ ಆಪತ್ತಿನ ನಡುವೆಯೂ ವಿಚಲಿತನಾಗುವುದಿಲ್ಲ. ಕೃಷ್ಣ ಪ್ರಜ್ಞೆಯಲ್ಲಿ ಇರಲು ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು . ಅದಕ್ಕಾಗಿ ಯೋಗ ಪ್ರಕ್ರಿಯೆ ಉಂಟು . ಹಾಗೆಯೇ ನಮ್ಮ ಮನಸ್ಸು ಯಾವಾಗ ಕೃಷ್ಣ ಮಂತ್ರವನ್ನು ಜಪಿಸ್ಸುವಲ್ಲಿ ತೊಡಗುತ್ತದೋ , ಆಗ ಮನಸ್ಸು ನಮ್ಮ ಹತೋಟಿಗೆ ಬರುತ್ತದೆ . 

ಭಗವದ್ಗೀತೆ ೬.೨೭ ರಲ್ಲಿ  ಕೃಷ್ಣನು ಯಾವ ಯೋಗಿಯು ನನ್ನಲ್ಲಿ ಮನಸನ್ನು ನೆಲೆಗೊಳಿಸುತ್ತಾನೋ ಅಂತಹವನು ಅತ್ಯುನ್ನತ ಮಟ್ಟದ ಸುಖವನು ಗಳಿಸುತ್ತಾನೆ, ಅವನು ತನ್ನ ಮನಸ್ಸನ್ನು ಬ್ರಹ್ಮನ್ನೊಂದಿಗೆ ಸಮೇಕರಿಸಿಕೊಂಡದ್ದರ ಫಲವಾಗಿ ಅವನು ಮುಕ್ತ ,ಶಾಂತ ಮನಸ್ಕ ಮತ್ತು  ಅವನ ರಜೋಗುಣಗಳು ತಣ್ಣಗಾಗುತ್ತವೆ ಹಾಗು ಅವನು ಪಾಪ ಮುಕ್ತನಾಗುತ್ತನೆಂದು ಹೇಳಿದ್ದಾನೆ . 
ಅದಕ್ಕಾಗಿ ನಾವೆಲ್ಲರೂ ಕೃಷ್ಣನ ಸ್ತುತಿಸುತ್ತ ಅವನ ಗೆಳೆತನವನ್ನು ಆರದಿಸುತ್ತಾ ನಿಜವಾದ ಸುಖವನ್ನು ಅನುಭವಿಸೋಣ . 

।। ಶ್ರೀ ಕೃಷ್ಣಾರ್ಪಣ ಮಸ್ತು ।।

-ಸಹನ 

Thursday, August 22, 2013

ಮಧ್ವನಾಮ 
========== 

ಮಧ್ವನಾಮ ಹೆಸರಾಂತ ಶ್ರೀಪಾದರಾಜರ ರಚನೆ . ಈ ಸ್ತುತಿಯು ಕನ್ನಡದಲ್ಲಿದ್ದು , ವಾಯು ದೇವರು ಹಾಗು ಅವರ ಮೂರು ಅವತಾರ ಹನುಮ-ಮದ್ವ-ಭೀಮ ರನ್ನು ಕೊಂಡಾಡಲಾಗಿದೆ. 




ಜಯ ಜಯ ಜಗತ್ರಾಣ, ಜಗದೊಳಗೆ ಸುತ್ರಾಣ
ಅಖಿಲ ಗುಣ ಸಧ್ಧಾಮ  ಮಧ್ವನಾಮ ... 



ಆವಾ ಕಚ್ಛಪರೂಪದಿಂದ  ಲಂಡೋದಕವ
ಓವಿ  ಧರಿಸಿದ  ಶೇಷಮೂರುತಿಯನು
ಆವವನ  ಬಳಿವಿಡಿದು  ಹರಿಯ  ಸುರರೈದುವರೋ
ಆ  ವಾಯು  ನಮ್ಮ  ಕುಲ  ಗುರುರಾಯನು|| ೧  ||

 
ಅವವನು  ದೇಹದೊಳಗಿರಲು  ಹರಿ  ನೆಲೆಸಿಹನು 
ಅವವನು  ತೊಲಗೆ  ಹರಿ  ತಾ ತೊಲಗುವ
ಅವವನು  ದೇಹದ  ಒಳ ಹೊರಗೆ   ನಿಯಾಮಕನು 
ಆ  ವಾಯು  ನಮ್ಮ  ಕುಲ  ಗುರು ರಾಯನು   || ೨ ||


ಕರಣಾಭಿಮಾನಿ  ಸುರರು   ದೇಹವ  ಬಿಡಲು
ಕುರುಡ  ಕಿವುಡ  ಮೂಕನೆನ್ದೆನಿಸುವ
ಪರಮ  ಮುಖ್ಯಪ್ರಾಣ  ತೊಲಗಲಾ  ದೇಹವನು
ಅರಿತು  ಪೆಣನೆಂದು  ಪೇಳ್ವರು  ಬುಧಜನ  ||  ೩ ||


ಸುರರೊಳಗೆ  ನರರೊಳಗೆ  ಸರ್ವಭೂತಗಳೊಳಗೆ
ಪರತರನೆನಿಸಿ ನೇಮದಿ   (ನಿಯಮಿಸಿ) ನೆಲೆಸಿಹ
ಹರಿಯನಲ್ಲದೆ  ಬಗೆಯ ಅನ್ನ್ಯರನು    ಲೋಕದೊಳು
ಗುರುಕುಳತಿಲಕ  ಮುಖ್ಯ  ಪವಮಾನನು ||೪ ||



ಹನುಮಂತ  ಅವತಾರ
=================
ತ್ರೇತೆಯಲಿ  ರಘುಪತಿಯ  ಸೇವೆ   ಮಾಡುವೆನೆಂದು
ವಾತಸುತ  ಹನುಮಂತನೆನ್ದೆನಿಸಿದ
ಪೋತಭಾವದಿ  ತರಣಿಬಿಮ್ಬಕೆ   ಲಂಘಿಸಿದ
ಈತಗೆಣೆ  ಯಾರು  ಮೂರ್ಲೋಕದೊಳಗೆ  || ೫  ||  


ತರಣಿಗಭಿಮುಖವಾಗಿ  ಶಬ್ದಶಾಸ್ತ್ರವ  ಪಠಿಸಿ
ಉರವಣಿಸಿ  ಹಿನ್ದುಮುನ್ದಾಗಿ  ನಡೆದ
ಪರಮ  ಪವಮಾನ ಸುತ   ಉದಯಾಸ್ತ  ಶೈಲಗಳಾ
ಭಾರದಿ  ಐದಿದ  ಏತಗುಪಮೆಯುಂಟೇ  || ೬ ||


ಅಖಿಲ  ವೇದಗಳ  ಸಾರವ   ಪಠಿಸಿದನು  ಮುನ್ನಲ್ಲಿ
ನಿಖಿಲ  ವ್ಯಾಕರಣಗಳ  ಇವ  ಪೇಳಿದ
ಮುಖದಲ್ಲಿ  ಕಿಂಚಿದಪಶಬ್ದ  ಇವಗಿಲ್ಲೇನ್ದು
ಮುಖ್ಯಪ್ರಾಣನನು  ರಾಮನನುಕರಿಸಿದ  || ೭ ||


ತರಣಿಸುತನನು  ಕಾಯ್ದ  ಶರಧಿಯನು  ನೆರೆದಾಟಿ
ಧರಣಿಸುತೆಯಳ  ಕಂಡು  ದನುಜರೊಡನೆ
ಭರದಿ  ರಣವನೆಮಾಡಿ  ಗೆಲಿದು  ದಿವ್ಯಾಸ್ತ್ರಗಳ
ಉರುಹಿ  ಲಂಕೆಯ  ಬಂದ   ಹನುಮಂತನು  || ೮ ||


ಹರಿಗೆ  ಚೂಡಾಮಣಿಯನಿತ್ತು  ಹರಿಗಳ  ಕೂಡಿ
ಶರಧಿಯನು  ಕಟ್ಟಿ   ಬಹು  ರಕ್ಕಸರನು
ಒರಿಸಿ  ರಣದಲಿ  ದಶಶಿರಣ  ಹುಡಿಗುಟ್ಟಿ  ತಾ
ಮೆರೆದ  ಹನುಮಂತ  ಬಲವಂತ  ಧೀರ  || ೯ ||


ಉರಗಬನ್ಧಕೆ  ಸಿಲುಕಿ  ಕಪಿವರರು  ಮೈ  ಮರೆಯೆ
ತರಣಿಕುಲತಿಲಕನಾಗ್ನೆಯನೆ  ತಾಳಿದ
ಗಿರಿಸಹಿತ  ಸಂಜೀವನವ  ಕಿತ್ತು  ತಂದಿಟ್ಟ
ಹರಿವರಗೆ  ಸರಿಯುಂಟೆ  ಹನುಮಂತಗೆ  || ೧೦  ||


ವಿಜಯ  ರಘುಪತಿ  ಮೆಚ್ಚಿ  ಧರಣಿಸುತೆಯಳಿಗೀಯೆ
ಭಜಿಸಿ  ಮೌಕ್ತಿಕದ  ಹಾರವನು  ಪಡೆದ
ಅಜಪದವಿಯನು  ರಾಮ  ಕೊಡುವೆನೆನೆ  ಹನುಮಂತ
ನಿಜಭಾಕುತಿಯನೆ  ಬೇಡಿ  ವರವ  ಪಡೆದ  || ೧೧ ||



ಭೀಮ  ಅವತಾರ
=================


ಆ  ಮಾರುತನೆ  ಭೀಮನೆನಿಸಿ  ದ್ವಾಪರದಿ
ಸೋಮಕುಲದಲ್ಲಿ  ಜನಿಸಿ  ಪಾರ್ಥರೊಡನೆ
ಭೀಮವಿಕ್ರಮ  ರಕ್ಕಸರ  ಮುರಿದೊಟ್ಟಿದ
ಆ  ಮಹಿಮಾ  ನಮ್ಮ  ಕುಲ ಗುರುರಾಯನು   || ೧೨ ||


ಕರದಿಂದ   ಶಿಶುಭಾವನಾದ  ಭೀಮನ  ಬಿಡಲು
ಗಿರಿಯೊಡೆದು  ಶತಶ್ರುನ್ಗವೆನ್ದೆನೆಸಿತು
ಹರಿಗಳ  ಹರಿಗಳಿಮ್  ಕರಿಗಳ  ಕರಿಗಳಿಮ್
ಅರೆವ  ವೀರನಿಗೆ  ಸುರಾ  ನರರು  ಸರಿಯೇ  || ೧೩ ||


ಕುರುಪ  ಗರಳವನಿಕ್ಕೆ  ನೆರೆಯುಂಡು  ತೇಗಿ
ಉರಗಗಳ  ಮೇಲ್ಬಿಡಲು  ಅದನೋರಸಿದ
ಅರಗಿನ  ಮನೆಯಲ್ಲಿ  ಉರಿಯನಿಕ್ಕಳು  ಧೀರ
ಧರಿಸಿ  ಜಾಹ್ನವೀಗೊಯ್ದ  ತನ್ನನುಜರ  || ೧೪ ||


ಅಲ್ಲಿದ್ದ  ಬಕ  ಹಿಡಿಮ್ಬಕರೆಂಬ   ರಕ್ಕಸರ
ನಿಲ್ಲದೊರಿಸಿದ  ಲೋಕಕಂಟಕರನು
ಬಲ್ಲಿದಸುರರ  ಗೆಲಿದು  ದ್ರೌಪದಿ  ಕರವಿಡಿದು
ಎಲ್ಲ  ಸುಜನರಿಗೆ  ಹರುಷವ  ಬೀರಿದ  || ೧೫  ||


ರಾಜಕುಲ  ವಜ್ರನೆನಿಸಿದ  ಮಾಗಧನ  ಸೀಳಿ
ರಾಜಸೂಯಯಾಗವನು  ಮಾಡಿಸಿದನು
ಆಜಿಯೊಳು  ಕೌರವರ  ಬಲವಾ  ಸವರುವೆನೆಂದು
ಮೂಜಗವರಿಯೆ  ಕಂಕಣಕಟ್ಟಿದ  || ೧೬ ॥

 
ದಾನವರ  ಸವರಬೇಕೆನ್ದು  ಬ್ಯಾಗ (ಬೇಗ )
ಮಾನನಿಧಿ  ದ್ರೌಪದಿಯ  ಮನದಿಂಗಿತವನರಿತು
ಕಾನನವ  ಪೊಕ್ಕು  ಕಿಮ್ಮೀರಾದಿಗಳ  ಮುರಿದು 
ಮಾನಿನಿಗೆ  ಸೌಗಂಧಿಕವನೆ   ತಂದ  || ೧೭ ॥


ದುರುಳ  ಕೀಚಕನು  ದ್ರೌಪದಿಯ  ಚೆಳುವಿಕೆಗೆ
ಮರುಳಾಗಿ  ಕರಕರಿಯ  ಮಾಡಲವನಾ
ಗರಡಿಮನೆಯೊಳು  ಬರಸಿ  ಒರಿಸಿ   ಅವನನ್ವಯವ
ಕುರುಪನಟ್ಟಿದ  ಮಲ್ಲಕುಲವ  ಸವರಿದ  || ೧೮ ॥


ಕೌರವರ  ಬಲ  ಸವರಿ  ವೈರಿಗಳ  ನೆಗ್ಗೊತ್ತಿ
ಓರಂತೆ   ಕೌರವನ  ಮುರಿದು  ಮೆರೆದ
ವೈರಿ  ದುಶ್ಯಾಸನನ  ರಣದಲಿ  ಎಡೆಗೆಡೆಹಿ(ತೊಡೆಯ ಲಡ್ಡಗೆಡಹಿ)
ವೀರನರಹರಿಯ  ಲೀಲೆಯ  ತೋರಿದ  || ೧೯॥


ಗುರುಸುತನು  ಸಂಗರದಿ  ನಾರಾಯಣಾಸ್ತ್ರವನು
ಉರವಣಿಸಿ  ಬಿಡಲು  ಶಸ್ತ್ರವ   ಬಿಸುಟರು
ಹರಿಕೃಉಪೆಯ  ಪಡೆದಿರ್ದ  ಭೀಮ  ಹುಂಕಾರದಲಿ
ಹರಿಯ  ದಿವ್ಯಾಸ್ತ್ರವನು  ನೆರೆ  ಅಟ್ಟಿದ  || ೨೦ ॥ 


ಚಂಡವಿಕ್ರಮ  ಗದೆಗೊಂಡು  ರಣದೊಳಗೆ  ಭೂ
ಮಂಡಲದೊಳಿದಿರಾದನ್ತ  ಖಳರನೆಲ್ಲ
ಹಿಂಡಿ  ಬಿಸುಟಿದ  ವ್ರುಕೋದರನ  ಅತಾಪವನು
ಕಂಡು  ನಿಲ್ಲುವರಾರು  ತ್ರಿಭುವನದೊಳು || ೨೧॥


ನಾರಿರೋದನ  ಕೇಳಿ  ಮನಮರುಗಿ  ಗುರುಸುತನ
ಹಾರ್ಹಿಡಿದು  ಶಿರೋರತ್ನ  ಕಿಟ್ಟಿ  ತೆಗೆದ
ನೀರೊಳಡಗಿದ್ದ  ದುರ್ಯೋಧನನ  ಹೊರಗೆಡಹಿ
ಉರುಯುಗ  ತನ್ನ  ಗದೆಯಿಂದ  ಮುರಿದ  || ೨೨ ||



ಮಧ್ವ  ಅವತಾರ 
 =================

ದಾನವರು  ಕಲಿಯುಗದೊಳವತರಿಸಿ  ವಿಭುದರೊಳು
ವೇನನ  ಮತವನರುಹಳದನರಿತು
ಗ್ಯಾನಿ  ತಾ  ಪವಮಾನ  ಭೂತಳದೊಳವತರಿಸಿ
ಮಾನನಿಧಿ  ಮಧ್ವಾಖ್ಯನೆನ್ದೆನಿಸಿದ  || ೨೩ ॥


ಅರ್ಭಕತನದೊಳೈದಿ  ಬದರಿಯಲಿ  ಮಧ್ವಮುನಿ
ನಿರ್ಭಯದಿ  ಸಕಲ  ಶಾಸ್ತ್ರಗಳ  ಪಠಿಸಿದ
ಉರ್ವಿಯೊಳು  ಮಾಯೆ  ಬೀರಲು  ತತ್ವಮಾರ್ಗವನು
(ಉರ್ವಿಯೊಳು  ಆಮ್ನಾಯ  ತತ್ವದ  ಮಾರ್ಗವನ್ನು )
ಓರ್ವ  ಮಧ್ವಮುನಿ  ತೋರ್ದ  ಸುಜನರ್ಗೆ
(ಸರ್ವ  ಸುಜನರಿಗೆ  ಅರುಹಿದನು  ಮೋದದಿ ) || ೨೪ ॥


ಸರ್ವೇಶ  ಹರಿ , ವಿಶ್ವ  ಎಲ್ಲ  ತಾ  ಪುಸಿಯೆಂಬ
ದುರ್ವಾದಿಗಳ  ಮತವ  ನೆರೆ  ಖಂಡಿಸಿ
ಸರ್ವೇಶ  ಹರಿ , ವಿಶ್ವ  ಸತ್ಯವೆನ್ದರುಹಿದ
ಶರ್ವಾದಿಗೀರ್ವಣ  ಸಂತತಿಯಲಿ  || ೨೫ ||


ಏಕವಿಮ್ಶತಿ  ಕುಭಾಷ್ಯಗಳ  ಬೇರನು  ತರಿದು
ಶ್ರೀಕರಾರ್ಚಿತನೊಲುಮೆ  ಶಾಸ್ತ್ರ  ರಚಿಸಿ
ಲೋಕತ್ರಯದೊಳಿದ್ದ  ಸುರರು  ಅಳಿಸುವಂತೆ
ಆ  ಕಮಲನಾಭಯತಿ  ನಿಕರಗೊರೆದ  || ೨೬ ॥

ಬದರಿಕಾಶ್ರಮಕೆ  ಪುನರಪಿಯಿಡಿ  ವ್ಯಾಸಮುನಿ
ಪದಕೆರಾಗಿ  ಅಖಿಲ  ವೆದಾರ್ಥಗಳನು
ಪದುಮನಾಭನ  ಮುಖದಿ  ತಿಳಿದು  ಬ್ರಹ್ಮತ್ವವೈಡಿದ
ಮಧ್ವಮುನಿರಾಯಗಭಿವನ್ದಿಪೆ  || ೨೭ ॥

ಜಯ  ಜಯತು  ದುರ್ವಾದಿಮತತಿಮಿರ  ಮಾರ್ತಾಂಡ
ಜಯ  ಜಯತು  ವಾದಿಗಜಪಂಚಾನನ
ಜಯ  ಜಯತು  ಚಾರ್ವಾಕಗರ್ವಪರ್ವತ  ಕುಲಿಶ
ಜಯ  ಜಯತು  ಜಗನ್ನಾಥ  ಮದ್ವನಾಥ  || ೨೮ ॥

ತುಂಗಕುಳಗುರುವರಣ  ಹ್ರುತ್ಕಮಲದೊಳು  ನೆಲೆಸಿ
ಭಂಗವಿಲ್ಲದ  ಸುಖವ  ಸುಜನಕೆಲ್ಲ
ಹಿಂಗದೆ  ಕೊಡುವ  ಗುರು  ಮಧ್ವಾನ್ತರಾತ್ಮಕ
ರಂಗವಿಠ್ಠಲನೆನ್ದು  ನೆರೆ  ಸಾರಿರೈ  || ೨೯ ॥



ಜಗನ್ನಾಥದಾಸರ  ಫಲ  ಸ್ತುತಿ
==========================


ಸೋಮಸೂರ್ಯೋಪರಾಗದಿ  ಗೋ  ಸಹಸ್ರಗಳ
ಭೂಮಿದೇವರಿಗೆ  ಸುರನದಿಯ  ತಟದಿ
ಶ್ರೀ  ಮುಕುನ್ದಾರ್ಪಣವೆನುತ  ಕೊಟ್ಟ  ಫಲಮಕ್ಕು
ಈ  ಮಧ್ವನಾಮ  ಬರೆದೋದಿದರ್ಗೆ  || ೩೦  ||

ಪುತ್ರರಿಲ್ಲದವರು  ಸತ್ಪುತ್ರರೈದುವರು
ಸರ್ವತ್ರದಲಿ  ದಿಗ್ವಿಜಯವಹುದು  ಸಕಲ
ಶತ್ರುಗಳು  ಕೆಡುವರು  ಅಪಮೃತ್ಯು  ಬರಳನ್ಜುವುದು
ಸೂತ್ರನಾಮಕನ  ಸಂಸ್ತುತಿ  ಮಾತ್ರದಿ  || ೩೧  ||

ಶ್ರೀಪಾದರಾಜ  ಪೆಳಿದ  ಮಧ್ವನಾಮ
ಸಂತಾಪ  ಕಳೆದಖಿಳಸೊಉಖ್ಯವನೀವುದು
ಶ್ರೀಪತಿ  ಶ್ರೀ  ಜಗನ್ನಾಥವಿಠ್ಠಲನ   ತೋರಿ  ಭಾವ
ಕೂಪಾರದಿನ್ದ  ಕಡೆಹಾಯಿಸುವುದು  || ೩೨ ॥


ಶ್ರೀ ಕೃಷ್ಣಾರ್ಪಣ ಮಸ್ತು ||


-ಶ್ರೀಪಾದರಜರು  

ಮದ್ವಾನಾಮವನ್ನು  ಇಲ್ಲಿ ಕೇಳಿರಿ :  http://www.youtube.com/watch?v=S6N5-ieYT84

 

Saturday, December 25, 2010

ಹರೇ ಕೃಷ್ಣ ಹರೇ ರಾಮ

 

 

ಹರೇ ಕೃಷ್ಣ ಹರೇ ಕೃಷ್ಣ        ಕೃಷ್ಣ ಕೃಷ್ಣ ಹರೇ ಹರೇ

 

 

 

 

ಹರೇ ರಾಮ ಹರೇ ರಾಮ   ರಾಮ ರಾಮ ಹರೇ ಹರೇ




  


ಹದಿನಾರು ಪದಗಳಿಂದ ಕೂಡಿರುವ ಈ 'ಹರೇ ಕೃಷ್ಣ ಮಹಾ ಮಂತ್ರ 'ವನ್ನು ಜಪಿಸುವುದರಿಂದ ಕ್ರಮೇಣ ಈ ಕಲಹಯುಗದ ಎಲ್ಲಾ ದುರ್ಗುಣಗಳು ಇಲ್ಲವಾಗುತದೆ.ಈ ಮಹಾಮಂತ್ರದಲ್ಲಿರುವ 'ಕೃಷ್ಣ' ಮತ್ತು 'ರಾಮ' ಎಂಬ ಪದಗಳು ಪರಮ ಪುರುಷನ ನಾಮಗಳಾದರೆ, 'ಹರೇ' ಎಂಬುದು ಆ ಅಂತರಂಗ ಶಕ್ತಿ ಹಾಗೂ ಅವನ ನಾಮಗಳನ್ನು ಉಚ್ಚರಿಸಲು ಪ್ರೇರಣಾ ಶಕ್ತಿಯು ಆಗಿದೆ. ಈ ಮಹಾ ಮಂತ್ರವನ್ನು ಜಪಿಸುತ್ತ ಅಥವಾ ಸಂಕೀರ್ತನೆ ಮಾಡುತ್ತ ಭಗವಂತನ ಸಾಂಗತ್ಯದ ಅನುಭವವನ್ನು ಆಸ್ವಾದಿಸಬಹುದು.

- ಸಹನ

Monday, July 5, 2010

ಶ್ರೀ ಕೃಷ್ಣನ ಅಷ್ಟ ಮಹಿಷಿಯರು ಮತ್ತು ಮಕ್ಕಳು

ಶ್ರೀ ಕೃಷ್ಣನಿಗೆ ಹದಿನಾರು ಸಾವಿರದ ಒಂದು ನೂರ ಎಂಟು ಪತ್ನಿಯರು. ಅವರಲ್ಲಿ ಎಂಟು ಮಂದಿ 'ಅಷ್ಟ ಮಹಿಷಿ' ಯರಂದೆ ಕರೆಯಲ್ಪಡುವರು. ಅವರೆಲ್ಲರಿಗೂ ತಲಾ ಹತ್ತು ಮಕ್ಕಳು.
. ರುಕ್ಮಿಣಿ: ಪ್ರದ್ಯುಮ್ನ, ಚಾರುದೇಷ್ಣ, ಸುದೇಷ್ಣ, ಚಾರುದೇಹ, ಸುಚಾರು, ಚಾರುಗುಪ್ತ, ಭದ್ರಚಾರು, ಚಾರುಚಂದ್ರ, ವಿಚಾರು ಮತ್ತು ಚಾರು.

. ಸತ್ಯಭಾಮ: ಭಾನು, ಸುಭಾನು, ಸ್ವರ್ಭಾನು, ಪ್ರಭಾನು, ಭಾನುಮನ್, ಚಂದ್ರಭಾನು, ಬೃಹದ್ಭಾನು, ಅತಿಭಾನು, ಶ್ರೀಭಾನು ಮತ್ತು ಪ್ರತಿಭಾನು.

. ಜಾಂಬವತಿ: ಸಾಂಬ, ಸುಮಿತ್ರ, ಪುರುಜಿತ್, ಶತಜಿತ್, ಸಹಸ್ರಜಿತ್, ವಿಜಯ, ಚಿತ್ರಕೇತು, ವಸುಮಾನ್, ದ್ರವಿಕ ಮತ್ತು ಕ್ರತು.

. ನಗ್ನಜಿತಿ: ವೀರ, ಚಂದ್ರ, ಅಶ್ವಸೇನ, ಚಿತ್ರಗು, ವೇಗವಾನ್, ವೃಷ,ಆಮ, ಶಂಕು, ವಸು ಮತ್ತು ಕುಂತಿ.

. ಕಾಳಿಂದಿ: ಶ್ರುತ,ಕವಿ, ವೃಷ, ವೀರ, ಸುಬಾಹು, ಭದ್ರ, ಶಾಂತಿ, ದರ್ಶ, ಪೂರ್ಣಮಾಸ ಮತ್ತು ಸೋಮಕ.

. ಮದ್ರಾ: ಪ್ರಘೋಷ, ಗಾತ್ರವಾನ್, ಸಿಂಹ, ಬಲ, ಪ್ರಬಲ, ಊರ್ಧಗ, ಮಹಾಶಕ್ತಿ, ಸಹಾ, ಓಜ ಮತ್ತು ಅಪರಾಜಿತ.

. ಮಿತ್ರವಿಂದಾ: ವೃಕ, ಹರ್ಷ, ಅನಿಲ, ಗೃಧ್ರ, ವರ್ಧನ, ಉನ್ನದ, ಮಹಾಂಶ, ಪವನ, ವಹ್ನಿ ಮತ್ತು ಕ್ಷುಧಿ.
. ಭದ್ರಾ: ಸಂಗ್ರಾಮಜಿತ, ಬೃಹತ್ಸೇನ, ಸುರ, ಪ್ರಹರಣ, ಅರಿಜಿತ್, ಜಯ, ಸುಭದ್ರ, ವಾಮ, ಆಯುರ್ ಮತ್ತು ಸತ್ಯಕ.

ಇವರಷ್ಟೇ ಅಲ್ಲದೆ ಶ್ರೀಕೃಷ್ಣನಿಗೆ ರೋಹಿಣಿ ಎಂಬ ಪತ್ನಿಯಲ್ಲಿ ಹತ್ತು ಮಂದಿ ಶೂರರು ಜನಿಸಿದರು. ಜೊತೆಗೆ ಎಲ್ಲ ಹದಿನಾರು ಸಾವಿರ ಪತ್ನಿಯರಲ್ಲೂ ಹತ್ತು ಮಕ್ಕಳು ಜನಿಸಿ, ಕೃಷ್ಣನ ಮಕ್ಕಳ ಸಂಖ್ಯೆ ಲಕ್ಷವನ್ನು ಮೀರಿತು!

- ಸಹನ

ಆಧಾರ : ಭಾಗವತ

Friday, July 10, 2009

ಕೃಷ್ಣ೦ ವ೦ದೇ ಜಗದ್ಗುರು೦

ನಮಸ್ಕಾರ/\:)


ಹಿ೦ದೂ ಧರ್ಮವು ಗುರುತಿಸಲ್ಪಡುವುದು ’ಭಗವದ್ಗೀತೆ’ಯಿ೦ದಲೇ ಎ೦ದರೆ ಅತಿಶಯೋಕ್ತಿಯ ಮಾತಾಗಲಾಗದು. ಹಿ೦ದೂ ಒ೦ದು ಧರ್ಮವಾಗಿರದೇ ಅದು ಜೀವನ ಕ್ರಿಯೆಯಾಗಿರುವುದಕ್ಕೆ ’ಭಗವದ್ಗೀತೆ’ಯಲ್ಲಿರುವ ಉಪಯುಕ್ತವಾದ, ಅರ್ಥಗರ್ಭಿತವಾದ ಸಾಲುಗಳು ಕಾರಣವೆ೦ದರೆ ತಪ್ಪಾಗಲಾಗದು. ಈ ಮಾತುಗಳಿ೦ದಲೇ ಅಲ್ಲವೇ, ಪಾ೦ಡವರು ಮಹಾಭಾರತ ಯುದ್ಧವನ್ನು ಜಯಿಸಿದ್ದು. ಪಾರ್ಥನಿಗೆ ಆತ್ಮಸ್ಥೈರ್ಯ ತು೦ಬಿದ್ದೇ ಈ ’ಭಗವದ್ಗೀತೆ’. ಇದನ್ನು ಕುರುಕ್ಷೇತ್ರದಲ್ಲಿ ಉಪದೇಶಿಸಿದ್ದು ಕೃಷ್ಣ ಪರಮಾತ್ಮ. ಮಹಾಭಾರತವೂ ಒ೦ದು ಕೃಷ್ಣಲೀಲೆಯೇ ಅಲ್ಲವೇ !! ಹಲವಾರು ತರಹದ ಕೃಷ್ಣಲೀಲೆಗಳಿ೦ದ ಎಲ್ಲಾ ವಯಸ್ಸಿನ ಮನುಜರಿಗೆ ಇಷ್ಟವಾಗುವ ಕೃಷ್ಣ ಪರಮಾತ್ಮನ ಜನ್ಮ ವೃತ್ತಾ೦ತವನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕೃಷ್ಣನ ಜನ್ಮ ವೃತ್ತಾ೦ತವು ಹಲವಾರು ಕುತೂಹಲಕಾರಿ ಘಟನೆಗಳೊ೦ದಿಗೆ ಕೂಡಿದೆ. ಈ ರೋಮಾ೦ಚನಕಾರಿ ಕಥೆಯನ್ನು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ’ಮಹಾಭಾರತ’ ಧಾರವಾಹಿಯನ್ನು ನೋಡಿದವರು ಊಹಿಸಬಲ್ಲರು. ಕೃಷ್ಣನ ಜನ್ಮ ತಾಳಿದ್ದು ನಮ್ಮ ಹಿ೦ದೂ ಧರ್ಮದ ಉದ್ಧಾರಕ್ಕಾಗಿಯೇ. ದ್ವಾರಪರಯುಗದಲ್ಲಿ ಆಡಳಿತ ನಡೆಸುತ್ತಿದ್ದ ಹಲವಾರು ರಾಜರುಗಳು ಮಾಡುತ್ತಿದ್ದ ಅತೀಯಾದ ಪಾಪ ಕಾರ್ಯಗಳಿ೦ದ ಬೇಸತ್ತು, ಭೂ ತಾಯಿಯು ಬ್ರಹ್ಮನಲ್ಲಿ ಮೊರೆ ಹೋಗುವ ಸ೦ದರ್ಭ ಬರುತ್ತದೆ. ಬ್ರಹ್ಮದೇವನು ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ವಿಷ್ಣುವಿನ ಬಳಿ ಹೋಗುತ್ತಾನೆ. ಆಗ ಬ್ರಹ್ಮದೇವನಿಗೆ ವಿಷ್ಣುದೇವನು "ನಾನು ಹತ್ತಿರದಲ್ಲಿಯೇ ಭೂಲೋಕದಲ್ಲಿ ಮತ್ತೊಮ್ಮೆ ಹುಟ್ಟಿ ಇದಕ್ಕೆ ಪರಿಹಾರ ಕೊಡುತ್ತೇನೆ" ಎ೦ದು ಭರವಸೆಯನ್ನು ನೀಡುತ್ತಾನೆ.
ಈ ಕಾರಣಕ್ಕಾಗಿ ವಿಷ್ಣುದೇವನು ಭೂಲೋಕದಲ್ಲಿ ತನ್ನ ೮ನೇ ಅವತಾರವನ್ನು ತಾಳುತ್ತಾನೆ. ಈ ವಿಷ್ಣುವಿನ ೮ನೇ ಅವತಾರವೇ ಶ್ರೀ ಕೃಷ್ಣನ ಜನ್ಮ.

ಭೂಲೋಕದಲ್ಲಿ ಪಾಪ ಕಾರ್ಯಗಳನ್ನು ಮಾಡುತ್ತಿದ್ದ ರಾಜರರುಗಳಲ್ಲಿ ಒ೦ದು ಕೈ ಮೇಲೇ ಎನ್ನುವ೦ತಿದ್ದವನು ಮಥುರೆಯನ್ನು ಆಳುತ್ತಿದ್ದ ಕ೦ಸ ಮಹಾರಾಜನು. ಇವನ ಆಡಳಿತವು ಪ್ರಜೆಗಳಿಗೆ ದು:ಸ್ವಪ್ನವಾಗಿ ಕಾಡುತ್ತಿತ್ತು. ಈತನಿಗೆ ಒಬ್ಬಳು ಸುಶೀಲವಾದ ಮತ್ತು ಸೌಮ್ಯ ಗುಣಗಳಿ೦ದ ಕೂಡಿದ ತ೦ಗಿಯಿದ್ದಳು. ಅವಳ ಮತ್ತು ವಸುದೇವನ ಮದುವೆಯ ದಿನದ೦ದು ಒ೦ದು ಅಶರೀರವಾಣಿ ಮೊಳಗಿ ಕ೦ಸನ ನಿದ್ದೆ ಕೆಡೆಸಿತು. ಆ ಅಶರೀರವಾಣಿಯು ಹೀಗಿತ್ತು - " ದೇವಕಿ ಮತ್ತು ವಸುದೇವರ ೮ನೇ ಮಗುವಿ೦ದ ನಿನ್ನ ಸರ್ವನಾಶವಾಗಲಿದೆ". ಇದರಿ೦ದ ಕ೦ಗೆಟ್ಟ ಕ೦ಸನು ಕೂಡಲೇ ತನ್ನ ತ೦ಗಿಯನ್ನು ಕೊಲ್ಲುವುದಕ್ಕೆ ಮು೦ದಾದನು. ವಸುದೇವನು ಇದನ್ನು ತಡೆಯುವಲ್ಲಿ ಸಫಲನಾಗುತ್ತಾನೆ. ಆದರೆ ಕ೦ಸನಿಗೆ ತನ್ನ ೮ನೇ ಮಗುವನ್ನು ಕೊಡುವುದಾಗಿ ಮಾತುಕೊಡುತ್ತಾನೆ. ಇದರಿ೦ದ ಸ೦ಪೂರ್ಣವಾಗಿ ತೃಪ್ತನಾಗದ ಕ೦ಸನು ದೇವಕಿ ಮತ್ತು ವಸುದೇವರನ್ನು ಸೆರೆವಾಸದಲ್ಲಿ ದೂಡುತ್ತಾನೆ.

ದೇವಕಿಗೆ ಹುಟ್ಟಿದ ಮೊದಲ ೭ ಮಕ್ಕಳನ್ನು ಕ೦ಸನು ಅಸಹನೆಯಿ೦ದ ಕ್ರೂರವಾಗಿ ಹತ್ಯೆಗೈಯ್ಯುತ್ತಾನೆ. ೮ನೇ ಮಗುವಿಗೆ ಜನ್ಮ ನೀಡುವ ಮುನ್ನವೇ ದೇವಕಿ ಮತ್ತು ವಸುದೇವರಿಗೆ ತಮ್ಮ ಮತ್ತು ಆ ೮ನೇ ಮಗುವಿನ ಕುರಿತು ಆತ೦ಕವಾಗುತ್ತದೆ. ಆ ಸ೦ದರ್ಭದಲ್ಲಿ ವಿಷ್ಣುದೇವನು ಪ್ರತ್ಯಕ್ಷನಾಗಿ ೮ನೇ ಮಗುವಾಗಿ ನಾನೇ ಹುಟ್ಟಿ ಬ೦ದು ನಿಮ್ಮನ್ನು ಮತ್ತು ಮಥುರೆಯ ಜನರನ್ನು ರಕ್ಷಿಸುತ್ತಿರುವುದಾಗಿ ತಿಳಿಸುತ್ತಾನೆ. ಆದರೆ, ಹುಟ್ಟಿದ ಮಗುವನ್ನು ವಸುದೇವನ ಸ್ನೇಹಿತನಾದ ಗೋಕುಲದ ಗೋಪಾಲಕನಾದ ನ೦ದಗೋಕುಲನ ಬಳಿ ಹೊತ್ತೊಯ್ದು ಅಲ್ಲಿ೦ದ ಅವನಿಗೆ ಮತ್ತು ಯಶೋದೆಗೆ ಹುಟ್ಟಿದ ಹೆಣ್ಣು ಮಗುವನ್ನು ತರುವ೦ತೆ ಆದೇಶಿಸುತ್ತಾನೆ. ಈ ಕಾರ್ಯಕ್ಕೆ ನಿನಗೆ ಯಾವ ಅಡ್ಡಿ ಆತ೦ಕಗಳಿರುವುದಿಲ್ಲ ಎ೦ದು ವಿಷ್ಣುದೇವನು ವಸುದೇವನಿಗೆ ಮನವರಿಕೆ ಮಾಡಿಕೊಡುತ್ತಾನೆ.

ಅಷ್ಟಮಿಯ ಮಧ್ಯರಾತ್ರಿ. ಪೂಜನೀಯ ಮಗುವೊ೦ದಕ್ಕೆ ಕ೦ಸನ ಸೆರೆಮನೆಯಲ್ಲಿ ದೇವಕಿಯು ಜನ್ಮ ನೀಡುತ್ತಾಳೆ. ವಿಷ್ಣುದೇವನ ಆದೇಶದ೦ತೆ, ವಸುದೇವನು ಆ ಮಗುವನ್ನು ಗೋಕುಲದ ತನ್ನ ಸ್ನೇಹಿತನ ಮನೆಗೆ ಕರೆದುಕೊ೦ಡು ಹೋಗುತ್ತಾನೆ. ಈ ಸ೦ದರ್ಭದಲ್ಲಿ ಅನೇಕ ಆಶ್ಚರ್ಯಕರ ಸ೦ಗತಿಗಳು ನಡೆಯುತ್ತವೆ. ವಸುದೇವನ ಕಾಲುಗಳಿಗೆ ಕಟ್ಟಿದ್ದ ಕಬ್ಬಿಣದ ಬೇಡಿಗಳು ಕಳಚಿರುತ್ತವೆ. ಕಾರಾಗೃಹದ ಬಾಗಿಲುಗಳು ತೆರೆದಿರುತ್ತವೆ. ಹೊರಗಡೆ ಅತೀವ ಮಳೆಗೈಯ್ಯುತ್ತಿದ್ದರೂ, ತು೦ಬಿದ ಯಮುನೆಯು ವಸುದೇವನಿಗೆ ದಾಟಲು ದಾರಿ ಮಾಡಿಕೊಡುತ್ತಾಳೆ. ಈ ಆಶ್ಛರ್ಯಗಳಿ೦ದ ಹರ್ಶಚಿತ್ತನಾದ ವಸುದೇವನು ನ೦ದಗೋಕುಲನ ಮನೆ ತಲಪುತ್ತಾನೆ. ಅಲ್ಲಿಯೂ ಕೂಡ ವಸುದೇವನಿಗೆ ಆಶ್ಢರ್ಯ ಕಾದಿರುತ್ತದೆ. ನ೦ದಗೋಕುಲನ ಮನೆಯ ಬಾಗಿಲು ತೆರೆದಿರುತ್ತದೆ. ಕೂಡಲೇ ಮಗುವನ್ನು ಬದಲಿಸಿ ವಸುದೇವನು ಸೆರೆಮನೆಗೆ ವಾಪಸಾಗುತ್ತಾನೆ.

ಮಾರನೇ ದಿನ, ಕ೦ಸನು ದೇವಕಿಯು ಹಡೆದ ವಿಚಾರ ಕೇಳಿ, ಕೂಡಲೇ ಕಾರಾಗೃಹಕ್ಕೆ ಧಾವಿಸಿ ಬರುತ್ತಾನೆ. ಕೂಡಲೇ ಆ ಮಗುವನ್ನು ಎತ್ತಿ ಸಾಯಿಸಲು ಹೊರಟಾಗ ಅದು ಅವನ ಕೈಯಿ೦ದ ತಪ್ಪಿಸಿಕೊ೦ಡು ಆಕಾಶಕ್ಕೆ ತಲುಪುತ್ತದೆ. ಅಲ್ಲಿ ಅದು ದೇವಿ ’ಯೋಗಮಾಯ’ಳಾಗಿ ಪರಿವರ್ತನೆಗೊ೦ಡು, ’ ಎಲೈ ಕರ್ಣ. ನೀನೆಷ್ಟು ಮೂಢನಿದ್ದೀಯಾ ! ನನ್ನನ್ನು ಸಾಯಿಸಿ ನಿನಗೇನು ಪ್ರಯೋಜನವಾಗುತ್ತದೆ. ನಿನ್ನನ್ನು ಸಾಯಿಸುವ ಆ ಶಕ್ತಿ ಆಗಲೇ ಹುಟ್ಟಿಯಾಗಿದೆ. ನಿನ್ನ ಸಾವನ್ನು ನೀನು ಬರಮಾಡಿಕೊಳ್ಳಲು ಸಿದ್ಧನಾಗು’ ಎ೦ದು ಕ೦ಸನಿಗೆ ಎಚ್ಚ್ರರಿಕೆಯ ಮಾತುಗಳನ್ನು ಹೇಳಿ ಮಾಯವಾಗುತ್ತಾಳೆ.

ಇತ್ತ ಗೋಕುಲದಲ್ಲಿ ಸ೦ತಸದ ಸುರಿಮಳೆ. ಕಾರಣ ಯಶೋದೆ ಮತ್ತು ನ೦ದಗೋಕುಲನ ಮುದ್ದಿನ ಮಗು. ಗೋಕುಲದಲ್ಲಿ ಅಷ್ಟಮಿಯ೦ದು ಹುಟ್ಟಿದ ಕೃಷ್ಣನ ಜನ್ಮವನ್ನು ನಾವು ಕರೆಯುವುದು ’ಗೋಕುಲಾಷ್ಟಮಿ’ಯೆ೦ದು.

ಹೀಗೆ ಅನೇಕ ಆಶ್ಚರ್ಯಕರ ಘಟನೆಗಳಿ೦ದ ಕೂಡಿದ ಕೃಷ್ಣನ ಜನ್ಮ ವೃತ್ತಾ೦ತದ ಕುರಿತಾದ ಈ ಲೇಖನ ಹೇಗಿತ್ತೆ೦ದು ತಿಳಿಸಲು ಮರೆಯಬೇಡಿ. ನನ್ನ ಮು೦ದಿನ ಲೇಖನದಲ್ಲಿ ಕೃಷ್ಣನ ಬಾಲ್ಯದ ದಿನಗಳು, ಕ೦ಸನ ವಧೆ, ಪಾ೦ಡವರ ಜೊತೆಗಿನ ಒಡನಾಟಗಳ ಕುರಿತು ತಿಳಿಸುತ್ತೇನೆ. ಅಲ್ಲಿಯವೆರೆಗೆ ಜಪಿಸುತ್ತಿರಿ - ’ಕೃಷ್ಣ೦ ವ೦ದೇ ಜಗದ್ಗುರು೦’.

|| ಹರೇ ಕೃಷ್ಣ ||

- ಸಹನ